ಮಂಗಳೂರು: ನವೀನ ಉದ್ಯಮ ಪರಿಕಲ್ಪನೆಗಳಿಗೆ ಹೂಡಿಕೆ ಮತ್ತು ಮಾರುಕಟ್ಟೆ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಮಂಗಳೂರಿನಲ್ಲಿ ನಡೆದ ಕೆಎಎನ್ ಕೋಹಾರ್ಟ್ 2 ಗ್ರ್ಯಾಂಡ್ ಡೆಮೊ ಡೇ ಕಾರ್ಯಕ್ರಮವು ಸ್ಟಾರ್ಟ್ಅಪ್ಗಳ ಬೆಳವಣಿಗೆಗೆ ಹೊಸ ವೇದಿಕೆಯಾಯಿತು. ಆರು ತಿಂಗಳ ವೇಗವರ್ಧಿತ ತರಬೇತಿ ಕಾರ್ಯಕ್ರಮದ ಸಮಾರೋಪವಾಗಿ ನಡೆದ ಸಮಾವೇಶದಲ್ಲಿ 12 ಸ್ಟಾರ್ಟ್ಅಪ್ಗಳು ತಮ್ಮ ನವೀನ ಉತ್ಪನ್ನಗಳು ಮತ್ತು ಉದ್ಯಮ ಪರಿಕಲ್ಪನೆಗಳನ್ನು ಹೂಡಿಕೆದಾರರು ಹಾಗೂ ಉದ್ಯಮ ತಜ್ಞರ ಮುಂದೆ ಪ್ರಸ್ತುತಪಡಿಸಿದವು.
ಶೈನ್ ಫೌಂಡೇಶನ್ ಸಂಸ್ಥೆಯು ಡರ್ಬಿ ಫೌಂಡೇಶನ್ ಸಹಯೋಗದಲ್ಲಿ ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್ನಲ್ಲಿ ಈ ಕಾರ್ಯಕ್ರಮ ಆಯೋಜಿಸಿತ್ತು.
ಕರ್ನಾಟಕ ಆಕ್ಸಿಲರೇಷನ್ ನೆಟ್ವರ್ಕ್ (ಕೆಎಎನ್) ಅಡಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉದ್ಯಮಿಗಳು, ಸ್ಟಾರ್ಟ್ಅಪ್ ಸಂಸ್ಥಾಪಕರು, ಹೂಡಿಕೆದಾರರು, ಉದ್ಯಮ ತಜ್ಞರು, ಮಾರ್ಗದರ್ಶಕರು, ಸರ್ಕಾರಿ ಪ್ರತಿನಿಧಿಗಳು ಹಾಗೂ ಉದ್ಯಮ ಸಂಘಟನೆಗಳ ಸದಸ್ಯರು ಸೇರಿದಂತೆ ಸುಮಾರು 400 ಮಂದಿ ಭಾಗವಹಿಸಿದ್ದರು.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ವತಿಯಿಂದ ರಾಜ್ಯ ಸರ್ಕಾರದ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ, ಕೆ-ಟೆಕ್, ಸ್ಟಾರ್ಟ್ಅಪ್ ಕರ್ನಾಟಕ ಹಾಗೂ ಬಿಯಾಂಡ್ ಬೆಂಗಳೂರು ಉಪಕ್ರಮಗಳ ಬೆಂಬಲದೊಂದಿಗೆ ಕೆಎಎನ್ ಕಾರ್ಯಕ್ರಮ ಅನುಷ್ಠಾನಗೊಳ್ಳುತ್ತಿದೆ. ಉದಯೋನ್ಮುಖ ಸ್ಟಾರ್ಟ್ಅಪ್ಗಳಿಗೆ ಮಾರ್ಗದರ್ಶನ, ಹೂಡಿಕೆದಾರರ ಸಂಪರ್ಕ, ಉದ್ಯಮ ಸಹಯೋಗ ಹಾಗೂ ಮಾರುಕಟ್ಟೆ ಅವಕಾಶಗಳನ್ನು ಒದಗಿಸುವುದು ಇದರ ಉದ್ದೇಶವಾಗಿದೆ.
ಕೆಎಎನ್ ಕೋಹಾರ್ಟ್ 2ರ ಅಡಿಯಲ್ಲಿ ಶೈನ್ ಫೌಂಡೇಶನ್ ಮತ್ತು ಡರ್ಬಿ ಫೌಂಡೇಶನ್ ಮೂಲಕ ಒಟ್ಟು 19 ಸ್ಟಾರ್ಟ್ಅಪ್ಗಳನ್ನು ಆಯ್ಕೆ ಮಾಡಲಾಗಿತ್ತು. ಈ ಪೈಕಿ 12 ಸಂಸ್ಥೆಗಳು ಗ್ರ್ಯಾಂಡ್ ಡೆಮೊ ಡೇಯಲ್ಲಿ ಪಾಲ್ಗೊಂಡು ತಮ್ಮ ವ್ಯವಹಾರ ಮಾದರಿ, ನವೀನ ಪರಿಹಾರಗಳು, ಉತ್ಪನ್ನಗಳ ಅಭಿವೃದ್ಧಿ ಹಾಗೂ ಉದ್ಯಮದ ಬೆಳವಣಿಗೆಯ ಹಂತಗಳನ್ನು ಪರಿಚಯಿಸಿದವು.
ಹೂಡಿಕೆದಾರರು, ಉದ್ಯಮ ತಜ್ಞರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಸೇರಿದಂತೆ ಸುಮಾರು 30 ಗಣ್ಯರೊಂದಿಗೆ ಸಂವಾದ ನಡೆಸಲು ಸ್ಟಾರ್ಟ್ಅಪ್ ಸಂಸ್ಥಾಪಕರಿಗೆ ಅವಕಾಶ ದೊರೆಯಿತು. ಈ ಸಂವಾದವು ಸಂಭಾವ್ಯ ಹೂಡಿಕೆ, ಕಾರ್ಯತಂತ್ರದ ಪಾಲುದಾರಿಕೆ, ಉದ್ಯಮ ಸಹಯೋಗ ಹಾಗೂ ಮಾರುಕಟ್ಟೆ ಪ್ರವೇಶಕ್ಕೆ ಸಂಬಂಧಿಸಿದ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿತು.
ಕಾರ್ಯಕ್ರಮದ ಭಾಗವಾಗಿ ಸ್ಟಾರ್ಟ್ಅಪ್ ವಸ್ತುಪ್ರದರ್ಶನ ಮತ್ತು ಉತ್ಪನ್ನಗಳ ನೇರ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು. ಭಾಗವಹಿಸಿದವರು ಉತ್ಪನ್ನಗಳನ್ನು ವೀಕ್ಷಿಸುವುದರ ಜತೆಗೆ ಅವುಗಳ ಸಂಸ್ಥಾಪಕರೊಂದಿಗೆ ನೇರವಾಗಿ ಚರ್ಚಿಸಿ ಮಾಹಿತಿ ಪಡೆದುಕೊಂಡರು.
ಸಹ್ಯಾದ್ರಿ ಸಮೂಹ ಸಂಸ್ಥೆಗಳ ಟ್ರಸ್ಟಿ ಕೃಷ್ಣ ಹೆಗ್ಡೆ, ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ಎಸ್. ಇಂಜಾಗನೇರಿ, ಶೈನ್ ಫೌಂಡೇಶನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಾನ್ಸನ್ ಟೆಲ್ಲಿಸ್, ಎಸಿಐಸಿ ಸಹ್ಯಾದ್ರಿ ಫೌಂಡೇಶನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನು ಆನಂದ್ ಆರ್. ಉಪಸ್ಥಿತರಿದ್ದರು.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ನ ಕೆಎಎನ್ ಕಾರ್ಯಕ್ರಮ ವ್ಯವಸ್ಥಾಪಕ ಸುವಿನ್ ನಾರಾಯಣ್, ಮಂಗಳೂರು ಕ್ಲಸ್ಟರ್ ಮುಖ್ಯಸ್ಥ ವೈಶಾಖ್ ಪೈ, ಡರ್ಬಿ ಫೌಂಡೇಶನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯನಾರಾಯಣ ಬಿ.ವಿ. ಹಾಗೂ ವೆಂಟಾನಾ ವೆಂಚರ್ಸ್ನ ಜನರಲ್ ಪಾರ್ಟ್ನರ್ ಶೈಲಜಾ ರಾವ್ ಸೇರಿದಂತೆ ಉದ್ಯಮ ಕ್ಷೇತ್ರದ ಹಲವು ಗಣ್ಯರು ಭಾಗವಹಿಸಿದ್ದರು.
ಕರ್ನಾಟಕದ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಶೈನ್ ಫೌಂಡೇಶನ್ ಮತ್ತು ಡರ್ಬಿ ಫೌಂಡೇಶನ್ಗಳ ಸಹಯೋಗದ ಪ್ರಯತ್ನಕ್ಕೆ ಈ ಕಾರ್ಯಕ್ರಮ ಮತ್ತೊಂದು ಮೈಲಿಗಲ್ಲಾಗಿದೆ. ನವೋದ್ಯಮಗಳನ್ನು ಹೂಡಿಕೆದಾರರು, ಉದ್ಯಮ ನಾಯಕರು ಹಾಗೂ ಮಾರ್ಗದರ್ಶಕರೊಂದಿಗೆ ಸಂಪರ್ಕಿಸುವ ಮೂಲಕ ಅವುಗಳ ಬೆಳವಣಿಗೆಗೆ ವೇಗ ನೀಡುವುದು ಮತ್ತು ರಾಜ್ಯದಲ್ಲಿ ನಾವೀನ್ಯತೆಯ ಉದ್ಯಮಗಳಿಗೆ ಉತ್ತೇಜನ ನೀಡುವುದು ಈ ಉಪಕ್ರಮದ ಆಶಯವಾಗಿದೆ.





