ಬೀಳಗಿ: ಪತ್ನಿ ನೇಣಿಗೆ ಶರಣಾಗಿ ಉಸಿರುಗಟ್ಟಿ ಸಾವನ್ನಪ್ಪುತ್ತಿದ್ದ ವೇಳೆ ರಕ್ಷಿಸುವ ಬದಲು ವಿಡಿಯೋ ಚಿತ್ರೀಕರಿಸಿದ ಆರೋಪ ಪತಿಯ ವಿರುದ್ಧ ಕೇಳಿಬಂದಿದ್ದು, ಈ ಅಮಾನವೀಯ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ನಡೆದಿದೆ.
ಮೃತ ಮಹಿಳೆ ಭಾಗ್ಯಶ್ರೀ (23) ಎಂದು ಗುರುತಿಸಲಾಗಿದೆ. 6 ವರ್ಷಗಳ ಹಿಂದೆ ಭಾಗ್ಯಶ್ರೀ ಮತ್ತು ಪ್ರವೀಣ್ ಮದುವೆ ಆಗಿದ್ದರು. ದಂಪತಿಗೆ ಮಗು ಇತ್ತು.
ಪತ್ನಿ ಅನೈತಿಕ ಸಂಬಂಧದ ಶಂಕೆ ಹಿನ್ನೆಲೆಯಾಗಿ ದಂಪತಿ ನಡುವೆ ಆಗಾಗ್ಗೆ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ಘಟನೆ ನಡೆದ ದಿನ ಭಾಗ್ಯಶ್ರೀ ನೇಣಿಗೆ ಶರಣಾಗುತ್ತಿದ್ದ ವೇಳೆ ಪತಿ ಆಕೆ ರಕ್ಷಿಸಲು ಮುಂದಾಗದೆ ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಭಾಗ್ಯಶ್ರೀ ಸಾವಿನ ಹಿಂದೆ ಕೊಲೆ ಇರಬಹುದೆಂಬ ಅನುಮಾನ ವ್ಯಕ್ತವಾಗಿದ್ದು, ಪ್ರಕರಣವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೀಳಗಿ ಪೊಲೀಸರು ಆರೋಪಿ ಪ್ರವೀಣ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಸಾವಿನ ನಿಖರ ಕಾರಣ ಹಾಗೂ ಘಟನೆಯ ಸತ್ಯಾಸತ್ಯತೆ ಕುರಿತು ಸಮಗ್ರ ತನಿಖೆ ಮುಂದುವರೆದಿದೆ.
What do you feel about this post?
Like
Love
Happy
Haha
Sad







