ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ದೊಡ್ಡ ಹಿತ್ತಲ ಗ್ರಾಮದಲ್ಲಿ ಮೂಲ ಸೌಕರ್ಯಗಳ ಕೊರತೆಯ ಮತ್ತೊಂದು ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ಗ್ರಾಮದಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಮೃತದೇಹವನ್ನು ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯಲು ಉಕ್ಕಿ ಹರಿಯುತ್ತಿದ್ದ ಹೊಳೆಯನ್ನು ಗ್ರಾಮಸ್ಥರು ಜೀವದ ಹಂಗು ತೊರೆದು ದಾಟಿದ ಘಟನೆ ನಡೆದಿದೆ. ಈ ಘಟನೆ ಜಾಲತಾಣದಲ್ಲಿ ವೈರಲ್ ಅಗುತ್ತಿದ್ದು, ಬಾರಿ ಚರ್ಚೆಗೆ ಗ್ರಾಸವಾಗುತ್ತಿದೆ.
ನಿರಂತರ ಮಳೆಯಿಂದ ಭಾಸ್ಕೇರಿ ಹೊಳೆ ತುಂಬಿ ಹರಿಯುತ್ತಿದ್ದು, ಗ್ರಾಮದ ಸಂಪರ್ಕ ರಸ್ತೆಯೂ ಜಲಾವೃತ ಆಗಿದೆ. ಈ ಹಿನ್ನೆಲೆಯಲ್ಲಿ ಅಂತ್ಯಸಂಸ್ಕಾರಕ್ಕೆ ತೆರಳಲು ಬೇರೆ ಯಾವುದೇ ಪರ್ಯಾಯ ಮಾರ್ಗವಿಲ್ಲದೇ ಗ್ರಾಮಸ್ಥರು ಮೃತದೇಹವನ್ನು ಹೊತ್ತು ಹೊಳೆಯಲ್ಲೇ ನಡೆದು ದಾಟಿ ಬಂದು ಅಂತ್ಯಸಂಸ್ಕಾರ ನೆರವೇರಿಸಿದರು.
50 ಕ್ಕೂ ಹೆಚ್ಚು ಕುಟುಂಬಗಳು ವಾಸಿಸುವ ದೊಡ್ಡ ಹಿತ್ತಲ ಗ್ರಾಮಕ್ಕೆ ಇಂದಿಗೂ ಸಮರ್ಪಕ ಸಂಪರ್ಕ ರಸ್ತೆ ಹಾಗೂ ಹೊಳೆ ದಾಟಲು ಸೇತುವೆ ನಿರ್ಮಾಣ ಆಗಿಲ್ಲ. ಮಳೆಗಾಲದಲ್ಲಿ ಗ್ರಾಮ ಹೊರಜಗತ್ತಿನ ಸಂಪರ್ಕವನ್ನು ಸಂಪೂರ್ಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ.
ಗ್ರಾಮದಲ್ಲಿ ಯಾರಾದರೂ ಅಸ್ವಸ್ಥರಾದರೂ ಅಥವಾ ತುರ್ತು ವೈದ್ಯಕೀಯ ನೆರವು ಬೇಕಾದರೂ, ಸಾವಿನಂತಹ ದುಃಖದ ಸಂದರ್ಭಗಳಲ್ಲಿಯೂ ಗ್ರಾಮಸ್ಥರು ಜೀವದ ಹಂಗು ತೊರೆದು ಹೊಳೆ ದಾಟಬೇಕಾದ ಅನಿವಾರ್ಯತೆ ಎದುರಾಗುತ್ತಿದೆ.
ಈ ಘಟನೆ ಮತ್ತೊಮ್ಮೆ ಗ್ರಾಮದಲ್ಲಿನ ಮೂಲ ಸೌಕರ್ಯಗಳ ಕೊರತೆ ಬಯಲಿಗೆಳೆದಿದ್ದು, ದೊಡ್ಡ ಹಿತ್ತಲ ಗ್ರಾಮಕ್ಕೆ ಶಾಶ್ವತ ಸಂಪರ್ಕ ರಸ್ತೆ ಹಾಗೂ ಸೇತುವೆ ನಿರ್ಮಿಸಿ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಗ್ರಾಮಸ್ಥರು ಸರ್ಕಾರ ಹಾಗೂ ಜಿಲ್ಲಾಡಳಿತ ಆಗ್ರಹಿಸಿದ್ದಾರೆ.
What do you feel about this post?
Like
Love
Happy
Haha
Sad



