ಉಪ್ಪಿನಂಗಡಿಯಲ್ಲಿ ನೇತ್ರಾವತಿ-ಕುಮಾರಧಾರ ಮೈದುಂಬಿ ಹರಿವು: ಪ್ರವಾಹ ಭೀತಿ, ತಗ್ಗು ಪ್ರದೇಶದ ನಿವಾಸಿಗಳ ಸ್ಥಳಾಂತರ

ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ ಮಳೆ ಸುದ್ದಿ

Spread the love

ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿಗಳಾದ ನೇತ್ರಾವತಿ ಮತ್ತು ಕುಮಾರಧಾರ ನದಿ ಪಾತ್ರಗಳಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಉಪ್ಪಿನಂಗಡಿಯಲ್ಲಿ ಎರಡೂ ನದಿಗಳು ಶುಕ್ರವಾರ ತಡರಾತ್ರಿಯಿಂದ ಮೈದುಂಬಿ ಹರಿಯುತ್ತಿದ್ದು, ಪ್ರವಾಹದ ಭೀತಿ ಆವರಿಸಿದೆ.

<

ಶನಿವಾರ ಬೆಳಗ್ಗೆ ನೇತ್ರಾವತಿ ನದಿಯ ನೀರಿನ ಮಟ್ಟ ಸಮುದ್ರ ಮಟ್ಟದಿಂದ 28 ಮೀಟರ್ ಎತ್ತರದಲ್ಲಿತ್ತು. ಬೆಳಿಗ್ಗೆ ಸ್ವಲ್ಪ ಇಳಿಕೆಯಾಗಿದ್ದ ನೀರಿನ ಮಟ್ಟ ಮಧ್ಯಾಹ್ನದಿಂದ ಮತ್ತೆ ಏರಿಕೆಯಾಗಿದ್ದು, ರಾತ್ರಿ 7.30ರ ವೇಳೆಗೆ 30 ಮೀಟರ್ ತಲುಪಿದೆ. ಇಲ್ಲಿ ನಿಗದಿಪಡಿಸಿರುವ ಅಪಾಯದ ಮಟ್ಟ 30.05 ಮೀಟರ್ ಆಗಿದ್ದು, ನದಿ ಅಪಾಯದ ಮಟ್ಟದ ಸಮೀಪ ತಲುಪಿರುವುದರಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಸ್ಥಾನದ ಸ್ನಾನಘಟ್ಟದ 36 ಮೆಟ್ಟಿಲುಗಳಲ್ಲಿ ರಾತ್ರಿ ವೇಳೆಗೆ 35 ಮೆಟ್ಟಿಲುಗಳು ನೀರಿನಲ್ಲಿ ಮುಳುಗಿದ್ದು, ಬಳಿಕ ನೀರಿನ ಮಟ್ಟ ಕೊಂಚ ಇಳಿದ ಪರಿಣಾಮ ಎರಡು ಮೆಟ್ಟಿಲುಗಳು ಗೋಚರಿಸಿವೆ.

ನದಿ ನೀರಿನ ಮಟ್ಟ ಏರಿಕೆಯಿಂದ ನದಿ ಪಾತ್ರದ ಕೃಷಿ ಭೂಮಿಗಳು ಜಲಾವೃತಗೊಂಡಿವೆ. ಉಪ್ಪಿನಂಗಡಿಯ ಸುಬ್ರಹ್ಮಣ್ಯ ಕ್ರಾಸ್ ಸಮೀಪದ ತಗ್ಗು ಪ್ರದೇಶಗಳಿಗೆ ನೇತ್ರಾವತಿ ನದಿಯ ನೀರು ನುಗ್ಗಿದ್ದು, ಸುಮಾರು ಆರು ಮನೆಗಳ ನಿವಾಸಿಗಳನ್ನು ಹಾಗೂ ಅವರ ಅಗತ್ಯ ಸಾಮಗ್ರಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಇದೇ ವೇಳೆ, ಗುಂಡ್ಯ ಹೊಳೆಯಲ್ಲಿಯೂ ನೀರಿನ ಹರಿವು ಹೆಚ್ಚಳವಾಗಿದ್ದು, ಅದರ ಪಾತ್ರದಲ್ಲಿರುವ ಕೃಷಿ ಪ್ರದೇಶಗಳು ನೀರಿನಿಂದ ಆವರಿಸಿವೆ. ಹವಾಮಾನ ಇಲಾಖೆ ಇನ್ನಷ್ಟು ಮಳೆಯ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಸ್ಥಳೀಯ ಅಧಿಕಾರಿಗಳು ನದಿ ಪಾತ್ರದ ನಿವಾಸಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ.

 

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *