ಮಂಗಳೂರು: ಗ್ರಾಮೀಣ ಪ್ರದೇಶದ ಆಸ್ತಿ ಮಾಲೀಕರು, ರೈತರು ಹಾಗೂ ಬಡ ಕುಟುಂಬಗಳಿಗೆ ಸಮಸ್ಯೆ ಆಗುತ್ತಿರುವ ಇ-ಸ್ವತ್ತು 2.0 ತಂತ್ರಾಂಶದಲ್ಲಿನ ಲೋಪದೋಷಗಳನ್ನು ಸರ್ಕಾರ ತಕ್ಷಣವೇ ಸರಿಪಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಒತ್ತಾಯಿಸಿದರು.
ಡಿಜಿಟಲೀಕರಣ ಹಾಗೂ ಆಡಳಿತ ಸುಧಾರಣೆಯ ಉದ್ದೇಶದಿಂದ ಜಾರಿಗೆ ತಂದಿರುವ ಇ-ಸ್ವತ್ತು 2.0 ವ್ಯವಸ್ಥೆ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಬದಲು ಕಚೇರಿಗಳ ಅಲೆದಾಟ, ವಿಳಂಬ ಹಾಗೂ ಮಾನಸಿಕ ಕಿರುಕುಳಕ್ಕೆ ಕಾರಣ ಆಗಿದೆ ಎಂದು ಆರೋಪಿಸಿದರು.
ಸರ್ಕಾರವೇ ವಿಧಾನ ಪರಿಷತ್ತಿನಲ್ಲಿ ನೀಡಿರುವ ಮಾಹಿತಿಯಂತೆ, 2025ರ ಡಿಸೆಂಬರ್ 1ರ ಬಳಿಕ ಇ-ಸ್ವತ್ತು 2.0 ಜಾರಿಯಾದ ನಂತರ ಸಲ್ಲಿಕೆಯಾದ 1,84,227 ಅರ್ಜಿಗಳ ಪೈಕಿ 23,802 ಅರ್ಜಿಗಳು ಇನ್ನೂ ವಿಲೇವಾರಿಗೆ ಬಾಕಿ ಉಳಿದಿವೆ. 6,290 ಅರ್ಜಿಗಳು ತಿರಸ್ಕೃತಗೊಂಡಿದ್ದು, 11ಬಿ ಅರ್ಜಿಗಳಲ್ಲಿಯೂ ಸಾವಿರಾರು ಅರ್ಜಿಗಳು ಅನುಮೋದನೆಗೆ ಬಾಕಿ ಇವೆ ಎಂದು ತಿಳಿಸಿದರು.

ಹಿಂದೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಇದ್ದ ಅಧಿಕಾರವನ್ನು ಇ-ಸ್ವತ್ತು 2.0 ವ್ಯವಸ್ಥೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಂತಕ್ಕೆ ವರ್ಗಾಯಿಸಿರುವುದರಿಂದ ಗ್ರಾಮೀಣ ಜನರು ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಿಗೆ ಅಲೆದಾಡುವಂತಾಗಿದೆ ಎಂದು ದೂರಿದರು.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ 94 ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮನೆ ನಿರ್ಮಾಣಕ್ಕೆ ಅಗತ್ಯ ದಾಖಲೆಗಳು ಹಾಗೂ ಅನುಮತಿ ಪಡೆಯುವುದು ಸಾರ್ವಜನಿಕರಿಗೆ ದೊಡ್ಡ ಸಮಸ್ಯೆಯಾಗಿರುವುದು ಗಮನಕ್ಕೆ ಬಂದಿದೆ ಎಂದರು.
ತಂತ್ರಾಂಶದಲ್ಲಿನ ಸರ್ವರ್ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವ ಜತೆಗೆ 11ಎ ಮತ್ತು 11ಬಿ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯನ್ನು ಸರಳಗೊಳಿಸಬೇಕು. ನಿಗದಿತ ಅವಧಿಯಲ್ಲಿ ಅರ್ಜಿ ವಿಲೇವಾರಿಯಾಗದಿದ್ದರೆ ಸ್ವಯಂಚಾಲಿತ ವ್ಯವಸ್ಥೆ ಮೂಲಕ ಸಮಸ್ಯೆ ಪರಿಹರಿಸುವ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಮನೆ ನಿರ್ಮಾಣದ ಅನುಮತಿ ಹಾಗೂ ಕಟ್ಟಡ ಪರವಾನಗಿ ಪಡೆವ ಪ್ರಕ್ರಿಯೆಯಲ್ಲಿ ವಿಳಂಬ ಮತ್ತು ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿದ್ದು, ಇದರಿಂದ ಬಡವರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ವಿಚಾರವನ್ನು ರಾಜಕೀಯವಾಗಿ ಪರಿಗಣಿಸದೆ ಸಾರ್ವಜನಿಕರ ಸಮಸ್ಯೆ ಪರಿಹಾರಕ್ಕೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು.
What do you feel about this post?
Like
Love
Happy
Haha
Sad





