ಕಾರವಾರ: ಜಿಲ್ಲೆಯ ವಿವಿಧ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಶನಿವಾರ ನಡೆದ ‘ಪ್ರಜಾ ಸೇವಾ ಆಂದೋಲನ’ ಸಭೆಗಳಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ವಿವಿಧ ಇಲಾಖೆಗಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಒಟ್ಟು 1,383 ಅರ್ಜಿಗಳು ಸಲ್ಲಿಕೆಯಾಗಿವೆ.
ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಅಂಕೋಲಾದಲ್ಲಿ ಹಾಗೂ ಕುಮಟಾ, ಭಟ್ಕಳ, ಶಿರಸಿ, ಯಲ್ಲಾಪುರ ಮತ್ತು ಹಳಿಯಾಳ ತಾಲ್ಲೂಕಿನ ವಿವಿಧ ಹೋಬಳಿಗಳಲ್ಲಿ ಸಭೆಗಳು ನಡೆದವು. ಸಾರ್ವಜನಿಕರು ತಮ್ಮ ಸಮಸ್ಯೆ ಹಾಗೂ ಕುಂದುಕೊರತೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಅರ್ಜಿಗಳನ್ನು ಸಲ್ಲಿಸಿದರು.
ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಗರಿಷ್ಠ 451 ಅರ್ಜಿಗಳು ಬಂದಿವೆ. ಕಂದಾಯ ಇಲಾಖೆಗೆ 270, ನಗರಾಭಿವೃದ್ಧಿ ಇಲಾಖೆಗೆ 135, ವಸತಿ ಇಲಾಖೆಗೆ 128 ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ 102 ಅರ್ಜಿಗಳು ಸಲ್ಲಿಕೆಯಾಗಿವೆ.
ಹೆಸ್ಕಾಂಗೆ 51, ಲೋಕೋಪಯೋಗಿ ಇಲಾಖೆಗೆ 50, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ 46 ಹಾಗೂ ಸಾರಿಗೆ ಇಲಾಖೆಗೆ 30 ಅರ್ಜಿಗಳು ಬಂದಿವೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 27, ಸಣ್ಣ ನೀರಾವರಿ ಇಲಾಖೆಗೆ 13, ಕಾರ್ಮಿಕ ಹಾಗೂ ಕೌಶಲ್ಯಾಭಿವೃದ್ಧಿ ಇಲಾಖೆಗೆ ತಲಾ 12 ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ 10 ಅರ್ಜಿಗಳು ಸಲ್ಲಿಕೆಯಾಗಿವೆ.
ಅರಣ್ಯ ಇಲಾಖೆಗೆ 7, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ 6, ಡಿಪಿಎಆರ್ (ಇ-ಆಡಳಿತ) ಹಾಗೂ ಜಲಸಂಪನ್ಮೂಲ ಇಲಾಖೆಗೆ ತಲಾ 5, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ 4 ಅರ್ಜಿಗಳು ಬಂದಿವೆ.
ಕೃಷಿ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ತಲಾ 3 ಅರ್ಜಿಗಳು ಸಲ್ಲಿಕೆಯಾಗಿದ್ದು, ಸಹಕಾರ, ಮೂಲಸೌಕರ್ಯ, ಸಮಾಜ ಕಲ್ಯಾಣ, ಹಣಕಾಸು, ಗೃಹ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ತಲಾ 2 ಅರ್ಜಿಗಳು ಬಂದಿವೆ. ಐಟಿ–ಬಿಟಿ ಇಲಾಖೆಗೆ ಒಂದು ಅರ್ಜಿ ಸಲ್ಲಿಕೆಯಾಗಿದೆ.
ಕಾಲಮಿತಿಯಲ್ಲಿ ವಿಲೇವಾರಿಗೆ ಕ್ರಮ
ಸಭೆಗಳಲ್ಲಿ ಸ್ವೀಕರಿಸಲಾದ ಎಲ್ಲ 1,383 ಅರ್ಜಿಗಳ ಪರಿಶೀಲನೆ ಪ್ರಸ್ತುತ ನಡೆಯುತ್ತಿದೆ. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸಿ, ಸಮಸ್ಯೆಗಳ ಸ್ವರೂಪಕ್ಕೆ ಅನುಗುಣವಾಗಿ ಕಾಲಮಿತಿಯಲ್ಲಿ ಸೂಕ್ತ ಪರಿಹಾರ ಒದಗಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಜಿಲ್ಲೆಯ ನಾಗರಿಕರ ಕುಂದುಕೊರತೆಗಳನ್ನು ಸ್ಥಳೀಯವಾಗಿಯೇ ಆಲಿಸಿ, ಸಂಬಂಧಪಟ್ಟ ಇಲಾಖೆಗಳ ಮೂಲಕ ಶೀಘ್ರ ಪರಿಹಾರ ಕಲ್ಪಿಸುವ ಉದ್ದೇಶದಿಂದ ಆಯೋಜಿಸಲಾದ ‘ಪ್ರಜಾ ಸೇವಾ ಅಭಿಯಾನ’ ಸಾರ್ವಜನಿಕರಿಗೆ ತಮ್ಮ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗಳ ಗಮನಕ್ಕೆ ತರಲು ವೇದಿಕೆಯಾಗಿದೆ.
ಸಾರ್ವಜನಿಕರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗಿರುವುದು ಅಭಿಯಾನಕ್ಕೆ ದೊರೆತ ಉತ್ತಮ ಸ್ಪಂದನೆಗೆ ಸಾಕ್ಷಿಯಾಗಿದೆ.



