ಮಂಡ್ಯ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2028ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಘೋಷಣೆ ಮಾಡಿದ್ದು, ಚುನಾವಣಾ ರಾಜಕೀಯದಿಂದ ಹಿಂದೆ ಸರಿದರೂ ಸಾರ್ವಜನಿಕ ಬದುಕಿನಲ್ಲಿ ಸಕ್ರಿಯ ಆಗಿಯೇ ಉಳಿದು ಜನರ ಪರವಾಗಿ ಧ್ವನಿ ಆಗುವುದಾಗಿ ಅವರು ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಳಿಕ ತಮ್ಮ ನಿರ್ಧಾರವನ್ನು ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದಾರೆ.
ಇನ್ನು ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಿರಲು ತೀರ್ಮಾನಿಸಿದ್ದೇನೆ. ಹಿಂದೆ ಚುನಾವಣೆಗೆ ಸ್ಪರ್ಧಿಸಿದಾಗ ಕ್ಷೇತ್ರದ ಜನರೇ ಅಭ್ಯರ್ಥಿಯನ್ನು ಬೆಂಬಲಿಸಿ ಗೆಲ್ಲಿಸುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ಅಭ್ಯರ್ಥಿಗಳೇ ಮತದಾರರಿಗೆ ಹಣ ನೀಡಬೇಕಾದ ಸ್ಥಿತಿ ನಿರ್ಮಾಣ ಆಗಿದೆ. ರಾಜಕೀಯ ಕಲುಷಿತಗೊಂಡಿದ್ದು, ಪ್ರಾಮಾಣಿಕ ರಾಜಕಾರಣಕ್ಕೆ ಉಳಿಗಾಲ ಕಡಿಮೆ ಆಗುತ್ತಿದೆ. ಇದೇ ಕಾರಣದಿಂದ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ತಮ್ಮ ವಯಸ್ಸು ಮತ್ತು ಆರೋಗ್ಯವೂ ಈ ನಿರ್ಧಾರಕ್ಕೆ ಕಾರಣವಾಗಿದೆ, ಸರ್ಕಾರದ ಅವಧಿ ಪೂರ್ಣಗೊಳ್ಳುವ ವೇಳೆಗೆ ತಮ್ಮ ವಯಸ್ಸು 82 ವರ್ಷವಾಗಲಿದ್ದು, ಈಗಿರುವ ಉತ್ಸಾಹ ಮತ್ತು ಆರೋಗ್ಯ ಆಗ ಇರದಿರಬಹುದು ಎಂದು ಹೇಳಿದರು.
1978 ರಲ್ಲಿ ತಾಲೂಕು ಮಂಡಳಿ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ್ದ ಅವರು, 2028ರ ವೇಳೆಗೆ ತಮ್ಮ ಸಾರ್ವಜನಿಕ ಜೀವನಕ್ಕೆ 50 ವರ್ಷಗಳು ಪೂರ್ಣಗೊಳ್ಳಲಿವೆ ಎಂದು ನೆನಪಿಸಿಕೊಂಡರು. ಈ ಐದು ದಶಕಗಳ ರಾಜಕೀಯ ಪಯಣದಲ್ಲಿ ಸೋಲು–ಗೆಲುವು ಎರಡನ್ನೂ ಕಂಡಿದ್ದರೂ, ತಾವು ನಂಬಿದ ಸಿದ್ಧಾಂತಗಳಿಗೆ ಎಂದಿಗೂ ದ್ರೋಹ ಮಾಡಿಲ್ಲ ಎಂಬ ತೃಪ್ತಿ ಇದೆ ಎಂದು ಹೇಳಿದರು.
ಚುನಾವಣಾ ರಾಜಕೀಯದಿಂದ ಹಿಂದೆ ಸರಿದರೂ ಜನರ ಸಮಸ್ಯೆಗಳ ಕುರಿತು ಧ್ವನಿಯಾಗಿಯೇ ಮುಂದುವರಿಯುವುದಾಗಿ ಅವರು ತಿಳಿಸಿದರು. ರಾಜ್ಯದ ಜನರು ತೋರಿದ ಪ್ರೀತಿ, ವಿಶ್ವಾಸದ ಋಣ ತೀರಿಸುವ ನಿಟ್ಟಿನಲ್ಲಿ ಉಳಿದ ಜೀವನವನ್ನೂ ಜನಸೇವೆಗೆ ಸಮರ್ಪಿಸುವುದಾಗಿ ಹೇಳಿದರು.
ಸಿದ್ದರಾಮಯ್ಯ ಅವರ ಈ ಘೋಷಣೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, 2028ರ ವಿಧಾನಸಭೆ ಚುನಾವಣೆ, ಕಾಂಗ್ರೆಸ್‌ನ ಭವಿಷ್ಯದ ನಾಯಕತ್ವ ಹಾಗೂ ಚುನಾವಣಾ ತಂತ್ರದ ಮೇಲೆ ಇದರ ಪರಿಣಾಮ ಹೇಗಿರಲಿದೆ ಎಂಬ ಕುರಿತು ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗಳು ಆರಂಭವಾಗಿವೆ.
What do you feel about this post?
Like
Love
Happy
Haha
Sad





