ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತಿಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ತನಿಖೆ ಪೂರ್ಣಗೊಳಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ವರ್ಷದ ತನಿಖೆಯ ಬಳಿಕ ಸಿ.ಎನ್.ಚಿನ್ನಯ್ಯ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ., ವಿಠಲ್ ಗೌಡ ಹಾಗೂ ಸುಜಾತಾ ಭಟ್ ಅವರ ವಿರುದ್ಧದ ಅಂತಿಮ ವರದಿಯನ್ನು ಬುಧವಾರ ಬೆಳ್ತಂಗಡಿ ನ್ಯಾಯಾಲಯದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಶಶಾಂಕ್ ನಾಗೇಂದ್ರ ಭಟ್ ಅವರಿಗೆ ಸಲ್ಲಿಸಿದರು.
ಎಸ್‌ಐಟಿ ಅಧಿಕಾರಿಗಳು ಮಧ್ಯಾಹ್ನ ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿ, 12 ಕಡತಗಳಲ್ಲಿ ಸಂಗ್ರಹಿಸಲಾದ 7 ಸಾವಿರಕ್ಕೂ ಅಧಿಕ ಪುಟಗಳ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ತನಿಖೆ ವೇಳೆ ದಾಖಲಿಸಲಾದ ವಿಡಿಯೊ ಹೇಳಿಕೆಗಳಿರುವ ಹಾರ್ಡ್‌ಡಿಸ್ಕ್ ಅನ್ನು ವರದಿಯೊಂದಿಗೆ ನ್ಯಾಯಾಲಯಕ್ಕೆ ಹಸ್ತಾಂತರ ಮಾಡಲಾಯಿತು.
ತನಿಖೆಯ ಅವಧಿಯಲ್ಲಿ ಒಟ್ಟು 255 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ. ಅಲ್ಲದೆ, ಮಾನವನ ಬುರುಡೆ, ಅಸ್ಥಿಪಂಜರ, ಮೊಬೈಲ್ ಫೋನ್‌ಗಳು, ವಿವಿಧ ದಾಖಲೆಗಳು ಹಾಗೂ ನ್ಯಾಯ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ಪರೀಕ್ಷೆಗೆ ಕಳುಹಿಸಿ ಮರಳಿದ ಎಲ್ಲ ವಸ್ತುಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಪ್ರಕರಣದ ದೂರುದಾರ ಚಿನ್ನಯ್ಯ ಅವರು ತಮ್ಮ ಪತ್ನಿಯೊಂದಿಗೆ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದ ಅವರ ವಿಚಾರಣೆಯನ್ನು ನ್ಯಾಯಾಲಯ ಅಕ್ಟೋಬರ್ 29 ಕ್ಕೆ ಮುಂದೂಡಿದೆ. ಎಸ್‌ಐಟಿ ಎಸ್ಪಿ ಸಿ.ಎ. ಸೈಮನ್, ಇನ್‌ಸ್ಪೆಕ್ಟರ್‌ಗಳಾದ ಕುಸುಮಾಧರ್, ಮಂಜುನಾಥ್ ಹಾಗೂ ತನಿಖಾ ತಂಡದ ಸಿಬ್ಬಂದಿ ಇದ್ದರು.
What do you feel about this post?
Like
Love
Happy
Haha
Sad



