ಪ್ರಶ್ನೆ ಪತ್ರಿಕೆ ಸೋರಿಕೆ, ಕೆಇಎ, ಕೆಪಿಎಸ್‌ಸಿ ನೇಮಕಾರಿ ಪರೀಕ್ಷಾ ಅಕ್ರಮ ಸಿಬಿಐ ತನಿಖೆಗೆ ನೀಡಿ: ಶಾಸಕ ಭರತ್ ಶೆಟ್ಟಿ

ಅಂತರ ಜಿಲ್ಲೆ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ರಾಜ್ಯ ಶಿಕ್ಷಣ ಶಿರಸಿ

Spread the love

ಮಂಗಳೂರು: ರಾಜ್ಯದಲ್ಲಿ ನಡೆದಿರುವ ಪರೀಕ್ಷಾ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ನೇಮಕಾತಿ ಪರೀಕ್ಷೆಗಳಲ್ಲಿನ ಗೊಂದಲಗಳ ಕುರಿತು ಸಮಗ್ರ ತನಿಖೆ ನಡೆಸಲು ಕೆಇಎ, ಕೆಪಿಎಸ್‌ಸಿ ಸೇರಿದಂತೆ ಎಲ್ಲ ಇಲಾಖೆಗಳ ಪರೀಕ್ಷಾ ಪ್ರಕರಣಗಳನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

<

ರಾಜ್ಯ ಸರ್ಕಾರ ಪರೀಕ್ಷಾ ಅಕ್ರಮಗಳ ವಿಚಾರದಲ್ಲಿ ದ್ವಂದ್ವ ನೀತಿ ಅನುಸರಿಸುತ್ತಿದೆ. ಕೇಂದ್ರದಲ್ಲಿ ನೀಟ್ ಪರೀಕ್ಷೆಗೆ ಸಂಬಂಧಿಸಿದ ಯಾವುದೇ ಲೋಪ ಕಂಡು ಬಂದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಣೆ ಮಾಡಲಾಗುತ್ತದೆ. ಆದರೆ ರಾಜ್ಯದಲ್ಲಿ ಕೆಇಎ, ಕೆಪಿಎಸ್‌ಸಿ ಸೇರಿದಂತೆ ವಿವಿಧ ಪರೀಕ್ಷೆಗಳಲ್ಲಿ ಗೊಂದಲ ಉಂಟಾದಾಗ ಅಧಿಕಾರಿಗಳ ಮೇಲೆ ಮಾತ್ರ ಕ್ರಮ ಜರುಗಿಸಿ ಸರ್ಕಾರ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದೆ ಎಂದು ಟೀಕಿಸಿದರು.

ಲಕ್ಷಾಂತರ ನಿರುದ್ಯೋಗಿ ಯುವಕರ ಭವಿಷ್ಯದೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದ್ದರು, ಸಚಿವ ಪ್ರಿಯಾಂಕ್ ಖರ್ಗೆ ಅವರು ತುಟಿ ಬಿಚ್ಚುತ್ತಿಲ್ಲ, ಆಡಳಿತ ವೈಫಲ್ಯದ ನೈತಿಕ ಹೊಣೆ ಹೊತ್ತು ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಅವರ ಇಲಾಖೆಯಲ್ಲೇ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿದ್ದರೂ ರಾಜ್ಯದ ಸಮಸ್ಯೆಗಳಿಗಿಂತ ರಾಷ್ಟ್ರ ರಾಜಕಾರಣದತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ವಿಧಾನಸಭೆಯಲ್ಲಿ ಯಾವುದೇ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗಳಿದ್ದರೂ ಉತ್ತರಿಸಲು ಮುಂದಾಗುತ್ತಾರೆ ಎಂದು ಹರಿಹಾಯ್ದರು.

ಇತ್ತೀಚಿನ ಕೆಇಎ, ಕೆಪಿಎಸ್‌ಸಿ, ಎಸ್‌ಎಸ್‌ಎಲ್‌ಸಿ, ಎಇಇ, ಪೊಲೀಸ್, ಕೃಷಿ ಇಲಾಖೆ ಹಾಗೂ ಕೆಇಬಿ ನೇಮಕಾತಿ ಪರೀಕ್ಷೆಗಳಲ್ಲಿ ಗೊಂದಲಗಳು ಮತ್ತು ಅಕ್ರಮಗಳ ಆರೋಪಗಳು ಕೇಳಿಬಂದಿವೆ ಎಂದು ಹೇಳಿದ ಅವರು, ಈ ಎಲ್ಲ ಪ್ರಕರಣಗಳ ಮೂಲವನ್ನು ಪತ್ತೆಹಚ್ಚಲು ಸ್ವತಂತ್ರ ಹಾಗೂ ನಿಷ್ಪಕ್ಷಪಾತ ತನಿಖೆ ಅಗತ್ಯ ಎಂದರು.

ಯಾವ ಯಾವ ಇಲಾಖೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆದಿವೆಯೋ, ಆ ಇಲಾಖೆಗಳ ಸಚಿವರು ನೈತಿಕ ಹೊಣೆ ಹೊತ್ತು ಅಧಿಕಾರ ತ್ಯಜಿಸಬೇಕು. ರಾಜ್ಯ ಸರ್ಕಾರ ತಕ್ಷಣವೇ ಎಲ್ಲ ಪರೀಕ್ಷಾ ಅಕ್ರಮ ಪ್ರಕರಣಗಳನ್ನು ಸಿಬಿಐಗೆ ವಹಿಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ರ‍್ಯಾಗಿಂಗ್‌ ಗೆ ಕಡಿವಾಣ ಅಗತ್ಯ: ಶಾಸಕ ಭರತ್ ಶೆಟ್ಟಿ

ಈಚೆಗೆ ಕಾಲೇಜುಗಳಲ್ಲಿ ರ‍್ಯಾಗಿಂಗ್‌ ಪ್ರಕರಣ ಅಧಿಕವಾಗುತ್ತಿವೆ. ಸೂಕ್ಷ್ಮ ಮನಃಸ್ಥಿತಿಯ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತಿದೆ. ರ‍್ಯಾಗಿಂಗ್‌ ಗೆ ಕಡಿವಾಣ ಹಾಕುವುದು ಪೊಲೀಸರ, ಸರ್ಕಾರದ ಕರ್ತವ್ಯ. ಆದರೆ ರ‍್ಯಾಗಿಂಗ್‌ ಅನ್ನು ಪೊಲೀಸ್ ಇಲಾಖೆ ಅಸಡ್ಡೆಯಿಂದ ತೆಗೆದುಕೊಂಡಿದೆ. ಓದುವುದಕ್ಕೆ ಬರುವ ವಿದ್ಯಾರ್ಥಿಗಳಿಗೆ ಪೂರಕ ವಾತಾವರಣ ಕಲ್ಪಿಸಿಕೊಡುವುದು ಸರ್ಕಾರದ ಕೆಲಸ. ಶಿಕ್ಷಣ ಸಂಸ್ಥೆಗಳೂ ಈ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಆ್ಯಂಟಿ ರ‍್ಯಾಗಿಂಗ್‌ ಕಮಿಟಿ ಇರಲೇಬೇಕು ಎಂ ನಿಯಮವಿದೆ. ಈ ಸಮಿತಿ ಯಾವಾಗ ಆ್ಯಕ್ಟಿವ್ ಆಗಿ ಇರುತ್ತದೆಯೋ ಅಲ್ಲಿ ಯಾವುದೇ ಸಮಸ್ಯೆಗಳು ಬರುವುದಿಲ್ಲ. ರ‍್ಯಾಗಿಂಗ್‌ ಹೆಲ್ಪ್‌ಲೈನ್‌ಗಳು ಕಾರ್ಯಾಚರಿಸುತ್ತಿವೆ. ಆದರೂ ಕೆಲವರು ಹೆದರಿ ಹೆಲ್ಪ್‌ ಲೈನ್‌ ಗಳಿಗೆ ಫೋನ್ ಮಾಡುವುದಿಲ್ಲ. ಆದ್ದರಿಂದ ಪೊಲೀಸರು ಪದೇಪದೇ ಬೀಟ್ ಮಾಡುವ ಮೂಲಕ, ಸ್ವಯಂ ಪ್ರೇರಿತವಾಗಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿ ರ‍್ಯಾಗಿಂಗ್‌ ಆಗಿದೆಯೇ ಎಂದು ಪರಿಶೀಲನೆ ನಡೆಸುವ ಮೂಲಕ ರ‍್ಯಾಗಿಂಗ್‌ ಅನ್ನು ಹತೋಟಿಗೆ ತರಬೇಕು ಎಂದು ಎಂದು ಶಾಸಕ ಡಾ. ವೈ. ಭರತ್ ಶೆಟ್ಟಿ ಆಗ್ರಹಿಸಿದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *