ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಹಾಗೂ ಮಂಗಳೂರು ದಕ್ಷಿಣ ಕ್ಷೇತ್ರ ಕಾಂಗ್ರೆಸ್ ಸಮಿತಿ ವತಿಯಿಂದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಶನಿವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ವಿಧಾನಪರಿಷತ್ ಸದಸ್ಯ ಪಿ.ವಿ. ಮೋಹನ್, ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ರಾಷ್ಟ್ರಪತಿಯಾಗುವ ಮೊದಲು ಶ್ರೇಷ್ಠ ಶಿಕ್ಷಕರಾಗಿ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದರು. ಶಿಕ್ಷಣವೇ ದೇಶದ ದೊಡ್ಡ ಸಂಪತ್ತು. ಪ್ರಜಾಪ್ರಭುತ್ವದ ಪಾಠ ತರಗತಿಯ ಕೊಠಡಿಯಲ್ಲಿಯೇ ಆರಂಭವಾಗಬೇಕು. ಶಿಕ್ಷಕರಿಗೆ ಸಲ್ಲಬೇಕಾದ ಗೌರವ ದೊರೆಯಬೇಕು ಎಂದರು.
ಸಮಾಜದಲ್ಲಿ ಯಾವುದೇ ಉತ್ತಮ ಬೆಳವಣಿಗೆ ನಡೆಯಬೇಕಾದರೂ ಶಿಕ್ಷಕರ ಬೋಧನೆ ಮತ್ತು ಮಾರ್ಗದರ್ಶನ ಅಗತ್ಯ. ಹೀಗಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ಶಿಕ್ಷಕರನ್ನು ಸನ್ಮಾನಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಅವರು ಹೇಳಿದರು.
ಮಾಜಿ ಶಾಸಕ ಜೆ.ಆರ್. ಲೋಬೊ ಮಾತನಾಡಿ, ವಿದ್ಯಾರ್ಥಿಗಳಿಗೆ ಮನೆಯಲ್ಲಿ ತಂದೆ-ತಾಯಿಯ ನಂತರ ಶಾಲೆಯಲ್ಲಿ ಶಿಕ್ಷಕರೇ ಮಾರ್ಗದರ್ಶಕರಾಗಿರುತ್ತಾರೆ. ಶಿಕ್ಷಕರು ತಮ್ಮ ಜ್ಞಾನ ಹಾಗೂ ಶಿಸ್ತನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಾರೆ. ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಶಿಕ್ಷಕರಿಗೆ ಸನ್ಮಾನ
ಈ ಸಂದರ್ಭದಲ್ಲಿ ನಗರದ ಕಾಸ್ಸಿಯ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಗ್ರೇಸಿ ಮರಿಯಾ ಡಿಸೋಜಾ, ಉಳ್ಳಾಲ ಬಿ.ಎಂ. ಶಾಲೆಯ ನಿವೃತ್ತ ಶಿಕ್ಷಕಿ ಉಷಾ ಎಂ., ಪಿ.ಎ. ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿಯರಾದ ದೀಪ್ತಿ ಉದ್ಯಾವರ ಮತ್ತು ದೀಪ್ತಿ ರಿನೆಟ್ ಡಿಸೋಜಾ, ಪ್ರೆಸ್ಟೀಜ್ ಶಾಲೆಯ ಶಿಕ್ಷಕಿಯರಾದ ಮುಫೀದಾ ಹುನೈಸ್ ಇಲ್ಯಾಸ್ ಹಾಗೂ ಫಾಹಿಜ್ಹಾ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಡೆನಿಸ್ ಡಿಸಿಲ್ವ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಪ್ಪಿ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ಪ್ರಭಾಕರ್ ಶ್ರೀಯಾನ್, ಶುಭೋದಯ ಆಳ್ವ, ಟಿ.ಕೆ. ಸುಧೀರ್, ಶಫೀಕ್, ನಗರ ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಲಿಯಾಕತ್ ಶಾಹ, ಸುಮನ್ ದಾಸ್, ತನ್ವಿರ್ ಶಾಹ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ದಕ್ಷಿಣ ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ರಮಾನಂದ ಪೂಜಾರಿ ಸ್ವಾಗತಿಸಿದರು. ದಕ್ಷಿಣ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಆಸೀಫ್ ಅಹ್ಮದ್ ಬೆಂಗ್ರೆ ವಂದಿಸಿದರು. ನಗರ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಉದಯ ಕುಂದರ್ ಕಾರ್ಯಕ್ರಮ ನಿರೂಪಿಸಿದರು.
What do you feel about this post?
Like
Love
Happy
Haha
Sad





