ಮಂಗಳೂರು: ಗೋಮಾತೆಯ ರಕ್ಷಣೆ ಹಾಗೂ ಸೇವೆಯ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಿರುವ ‘ಗೋ ಸಮ್ಮಾನ್ ಆಹ್ವಾನ ಅಭಿಯಾನ’ದ ಮಂಗಳೂರು–ಉಡುಪಿ ಜಿಲ್ಲೆಗಳ 3ನೇ ಹಂತದ ಸಹಿ ಸಂಗ್ರಹ ಅಭಿಯಾನಕ್ಕೆ ಕದ್ರಿಯ ಯೋಗೇಶ್ವರ ಮಠದಲ್ಲಿ ಸಂತರ ಸಾನ್ನಿಧ್ಯದಲ್ಲಿ ಭಾನುವಾರ ಚಾಲನೆ ನೀಡಲಾಯಿತು.
ಸಂತರು ಗೋ ಗ್ರಾಸವನ್ನು ಗೋವು ಮತ್ತು ಕರುವಿಗೆ ಅರ್ಪಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ಮಾಣಿಲ ಮಹಾಲಕ್ಷ್ಮೀ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ, ದೇಶದ ಅಸ್ತಿತ್ವ ಹಾಗೂ ಕೃಷಿ ವ್ಯವಸ್ಥೆಯ ಉಳಿವಿಗೆ ಗೋ ಸಂರಕ್ಷಣೆ ಅತ್ಯಗತ್ಯ ಎಂದರು.
ಸಾವಯವ ಕೃಷಿ ಹಾಗೂ ಗೋ ಆಧಾರಿತ ಕೃಷಿ ಪದ್ಧತಿಗಳನ್ನು ಉತ್ತೇಜಿಸಬೇಕು. ಗೋವು ಕೃಷಿ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದು, ಗೋವಿನ ಸಂಪನ್ಮೂಲಗಳು ಮಣ್ಣಿನ ಫಲವತ್ತತೆ ಹಾಗೂ ಕೃಷಿಯ ಸಮೃದ್ಧಿಗೆ ಪೂರಕವಾಗಿವೆ. ಆಧುನಿಕ ಜೀವನಶೈಲಿಯ ನಡುವೆ ಕೃಷಿ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಮಹತ್ವವನ್ನು ಮರೆಯಬಾರದು ಎಂದು ಹೇಳಿದರು.
ಗೋಮಾತೆಯ ವಾತ್ಸಲ್ಯ ಹಾಗೂ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಗೋ ಸಂರಕ್ಷಣೆಯನ್ನು ಇಡೀ ಸಮಾಜದ ಕರ್ತವ್ಯವಾಗಿ ಪರಿಗಣಿಸಬೇಕು ಎಂದು ಕರೆ ನೀಡಿದರು.
ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಗೋವಿನ ರಕ್ಷಣೆ ಕೇವಲ ಧಾರ್ಮಿಕ ವಿಚಾರವಲ್ಲ. ಅದು ದೇಶದ ಕೃಷಿ, ಪರಿಸರ ಹಾಗೂ ಸ್ವದೇಶಿ ಗೋ ತಳಿಗಳ ಸಂರಕ್ಷಣೆಯೊಂದಿಗೂ ನೇರವಾಗಿ ಸಂಬಂಧಿಸಿದೆ ಎಂದರು.
‘ಗೋ ಸಮ್ಮಾನ್ ಅಭಿಯಾನ’ದ ಸಹಿ ಸಂಗ್ರಹಕ್ಕೆ ಸೂಕ್ತ ಮನ್ನಣೆ ದೊರೆಯುವವರೆಗೆ ಹೋರಾಟ ಮುಂದುವರಿಸಬೇಕು. ಹಳ್ಳಿ–ಹಳ್ಳಿ ಹಾಗೂ ತಾಲೂಕು–ತಾಲೂಕಿಗೆ ತೆರಳಿ ಜನಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ದೇಶೀಯ ಗೋ ತಳಿಗಳ ಸಂರಕ್ಷಣೆಗೆ ವಿಶೇಷ ಆದ್ಯತೆ ನೀಡಬೇಕಿದೆ. ಗೋವಿನ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಸಮಾಜದ ಪ್ರತಿಯೊಬ್ಬರೂ ಏಕಕಂಠದಿಂದ ಅಭಿಯಾನಕ್ಕೆ ಕೈಜೋಡಿಸಬೇಕು. ಗೋವಿಗೆ ಸಮ್ಮಾನ ದೊರೆತರೆ ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಭಾರತೀಯ ಮೌಲ್ಯಗಳಿಗೆ ಸಮ್ಮಾನ ದೊರೆತಂತೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕದ್ರಿ ಯೋಗೇಶ್ವರ ಮಠದ ನಿರ್ಮಲನಾಥ್ ಜೀ ಮಹಾರಾಜ್, ಗೋ ಧಾಮ್ ಪಥ್‌ಮೇಡ, ರಾಜಸ್ಥಾನದ ಶ್ರೀ ಶ್ರೀ ರವೀಂದ್ರಾನಂದ ಸರಸ್ವತಿ ಜೀ ಮಹಾರಾಜ್, ಸಾಯಿ ಈಶ್ವರ್ ಗುರೂಜಿ, ಗೋಪಾಲನಂದ ಸರಸ್ವತಿ ಜೀ ಮಹಾರಾಜ್, ಕಾಳಿಕಾ ತನಯ ಉಮಾಮಹೇಶ್ವರ ಸ್ವಾಮೀಜಿ, ವಿಶ್ವ ಹಿಂದೂ ಪರಿಷತ್ ರಾಜ್ಯ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಗೋಸೇವಾ ಗತಿವಿಧಿ ಪ್ರಾಂತ ಸಂಯೋಜಕ ಪ್ರವೀಣ್ ಸರಳಾಯ, ರಾಜ್ಯ ತಂಡ ಸಂಯೋಜಕ ಜೀವನ್ ದೊಡ್ಡಬಳ್ಳಾಪುರ, ಸಂಭಾಗ ಪ್ರಭಾರಿ ಗಜೇಂದ್ರ, ಗೋ ಸಮ್ಮಾನ್ ಸಮಿತಿ ಜಿಲ್ಲಾ ಪ್ರಭಾರಿ ಅಶೋಕ ಇಳಂತಿಲ ಸೇರಿದಂತೆ ಗಂಗಾಧರ್ ಪೆರ್ಮಂಕಿ, ಶೈಲಜಾ ಭಟ್, ರಮೇಶ್ ಭಟ್, ಶಶಿಶೇಖರ್, ಹೇರಂಭ ಶಾಸ್ತ್ರಿ ಹಾಗೂ ಉದಯ ಭಟ್ ಇದ್ದರು.
What do you feel about this post?
Like
Love
Happy
Haha
Sad





