ಮಂಗಳೂರು: ಅಸೂಯೆ, ದ್ವೇಷ ಹಾಗೂ ಬೇಡವಾದ ವಿಚಾರಗಳು ಮನುಷ್ಯನನ್ನು ಸಣ್ಣವರನ್ನಾಗಿ ಮಾಡುತ್ತವೆ. ಎಲ್ಲ ಧರ್ಮಗಳ ಸಾರವೂ ಮನುಷ್ಯನಿಗೆ ಒಳಿತು ಮಾಡುವುದೇ ಆಗಿದೆ. ಆದ್ದರಿಂದ ಯಾರನ್ನೂ ದ್ವೇಷಿಸದೆ, ಮುಂಡಾಲ ಸಮಾಜದ ಎಲ್ಲರನ್ನೂ ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಚಿತ್ರದುರ್ಗದ ಆದಿಜಾಂಬವ ಮಹಾಸಂಸ್ಥಾನ ಮಠದ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಲಾಲ್‌ಬಾಗ್‌ನ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ಭಾನುವಾರ ನಡೆದ ಮುಂಡಾಲ ಮಹಾಸಭಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಪದಗ್ರಹಣ ಸಮಾರಂಭ, ಮುಂಡಾಲ ಸಮುದಾಯದ ಸ್ನೇಹ ಸಂಗಮ ಹಾಗೂ ಸಮ್ಮಾನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
‘ಸ್ವಾರ್ಥದಿಂದ ತುಂಬಿರುವ ಈ ಜಗತ್ತಿನಲ್ಲಿ ಉಳಿದವರ ಒಳಿತನ್ನು ಬಯಸುವ ಮನೋಭಾವ ಬೆಳೆಸಿಕೊಳ್ಳಬೇಕು. ಇತರ ಸಮುದಾಯದವರೊಂದಿಗೂ ಪ್ರೀತಿ, ವಿಶ್ವಾಸದಿಂದ ಇರಬೇಕು. ಆ ಸಮುದಾಯದ ಸಾಧಕರು ನಮಗೆ ಪ್ರೇರಣೆಯಾಗಬೇಕು. ಕಾಲೆಳೆಯುವ ಬದಲು ಕೈಹಿಡಿದು ಮೇಲೆತ್ತುವ ಕೆಲಸವಾಗಬೇಕು. ದ್ವೇಷಕ್ಕಿಂತ ಪ್ರೀತಿಗೆ ಆದ್ಯತೆ ನೀಡಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು’ ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಚ್ಚೂರು ಮಾಲ್ತಿದೇವಿ ದೇವಸ್ಥಾನದ ಧರ್ಮದರ್ಶಿ ಹಾಗೂ ಮಾಲ್ತಿದೇವಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಗೋಕುಲ್‌ದಾಸ್ ಬಾರ್ಕೂರು, ‘ಸಂಘಟನೆಯ ಉದ್ದೇಶ ಈಡೇರಿಸಲು ಎಲ್ಲರೂ ಕೈಜೋಡಿಸಬೇಕು. ವಿಶಾಲ ದೃಷ್ಟಿಕೋನದೊಂದಿಗೆ ಸಮುದಾಯಕ್ಕೆ ಬೆನ್ನೆಲುಬಾಗಿ ನಿಲ್ಲಬೇಕು. ಬಬ್ಬುಸ್ವಾಮಿಯ ಸೇವೆ ಮಾಡುವವರು ಆಡಳಿತ ಕ್ಷೇತ್ರದಲ್ಲಿಯೂ ಆತ್ಮಸ್ಥೈರ್ಯ ಬೆಳೆಸಿಕೊಂಡು ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು’ ಎಂದರು.
ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ಮಾಜಿ ಸಚಿವ ರಮಾನಾಥ ರೈ ಹಾಗೂ ಮೂಡ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮುಂಡಾಲ ಮಹಾಸಭಾದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಶಿವಪ್ಪ ನಂತೂರು ಅಧ್ಯಕ್ಷತೆ ವಹಿಸಿದ್ದರು. ನಂತೂರಿನಲ್ಲಿ ಮುಂಡಾಲ ಮಹಾಸಭಾದ ಜಿಲ್ಲಾ ಕಚೇರಿಯನ್ನು ಸಂತೋಷ್ ಕುಮಾರ್ ಬಜ್ಪೆ ಉದ್ಘಾಟಿಸಿದರು. ಮೆರವಣಿಗೆಗೆ ಮುಂಡಾಲ ಮಹಾಸಭಾದ ಗೌರವಾಧ್ಯಕ್ಷ ಟಿ. ಸದಾಶಿವ ಕುಂದರ್ ಹಾಗೂ ವೆಂಕಟೇಶ ಅಶೋಕನಗರ ಚಾಲನೆ ನೀಡಿದರು. ಹರೀಶ್ ಜೆ. ಕೊಲಕಾಡಿ, ಬೆಂಗಳೂರು ಅವರು ಸಂಸ್ಥೆಯ ಲಾಂಛನ ಅನಾವರಣಗೊಳಿಸಿದರು.

ವಿವಿಧ ಮುಂಡಾಲ ಸಂಘಟನೆಗಳ ಪ್ರಮುಖರಾದ ರಘುವೀರ್ ಬಾಬುಗುಡ್ಡ, ಶಿವರಾಜ್ ಮಲ್ಲಾರ್ ಕಾಪು, ವೈ.ಜಿ. ಸುರೇಶ್ ಚಿಕ್ಕಮಗಳೂರು, ಶಂಕರ್ ಪದಕಣ್ಣಾಯ, ವಿಜಯ ಕುಮಾರ್ ಚಿಕ್ಕಮಗಳೂರು, ಮಂಜುನಾಥ ಶೃಂಗೇರಿ, ಸಂಕೇಶ್ವರ ಮೂಡಿಗೆರೆ, ಮಂಜುನಾಥ ಕರ್ಕೇರ ಪಡುಬಿದ್ರಿ, ಜಯಂತ್ ಕೊಳಂಬೆ, ಉಮೇಶ್ ಕುಮಾರ್ ಬಿಜೈ ಕಾಪಿಕಾಡ್, ಚಂದ್ರಶೇಖರ್ ಮಂಗಳೂರು, ಶಂಕರ್ ಮೂಡಿಗೆರೆ, ಆಕಾಶ್ ಕೊಟ್ಯಾನ್ ಉಡುಪಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿಶೇಷ ಆಹ್ವಾನಿತರಾಗಿ ಪೂವಪ್ಪ ಗುರಿಕಾರ, ಪ್ರವೀಣ್‌ಚಂದ್ರ ಕರ್ಕೇರ, ಪ್ರೇಮ ರಾಜೇಶ್ ಕುಚ್ಚಿಕಾಡ್, ಶಶಿರೇಖಾ ಉದಯ ಕುಮಾರ್, ವಸಂತಿ ಜಯಪ್ರಕಾಶ್, ಪ್ರೇಮ ಕೋಟ್ಯಾನ್, ರಾಜಶ್ರೀ ಹಾಗೂ ವಿವಿಧ ಕ್ಷೇತ್ರಗಳ ಗುರಿಕಾರರು ಮತ್ತು ಸಂಘಟನೆಯ ಪ್ರಮುಖರು ಭಾಗವಹಿಸಿದ್ದರು.
ಮುಂಡಾಲ ಸಮುದಾಯದ ವಧು-ವರರ ಅನ್ವೇಷಣಾ ಮಾಹಿತಿ ಶಿಬಿರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಜತೆ ಕಾರ್ಯದರ್ಶಿ ವಿನೋದ್ ಆಳ್ವ ಸ್ವಾಗತಿಸಿದರು. ಸಂತೋಷ್ ನಂಬಿಯಾರ್ ಕಾರ್ಯಕ್ರಮ ನಿರ್ವಹಿಸಿದರು.
What do you feel about this post?
Like
Love
Happy
Haha
Sad





