ಮರಣ ನೋಂದಣಿಯಲ್ಲಿ ಸರಿಯಾದ ಆಧಾರ್ ಸಂಖ್ಯೆ ಕಡ್ಡಾಯ, ತಪ್ಪಾದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ

ಜಿಲ್ಲಾ ಸುದ್ದಿ ಕಾರವಾರ ಶಿರಸಿ

Spread the love

ಕಾರವಾರ: ಮರಣ ನೋಂದಣಿ ವೇಳೆ ಮೃತರ ಸರಿಯಾದ ಆಧಾರ್ ಸಂಖ್ಯೆಯನ್ನು ಪರಿಶೀಲಿಸಿ ದಾಖಲಿಸುವುದು ಕಡ್ಡಾಯವಾಗಿದ್ದು, ತಪ್ಪು ಆಧಾರ್ ಸಂಖ್ಯೆ ನಮೂದಿಸಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ  ಅವರು ಎಚ್ಚರಿಕೆ ನೀಡಿದ್ದಾರೆ.

<

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಜನನ-ಮರಣ ನೋಂದಣಿ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮರಣ ಪ್ರಮಾಣಪತ್ರದಲ್ಲಿ ಜೀವಂತ ವ್ಯಕ್ತಿಯ ಆಧಾರ್ ಸಂಖ್ಯೆ ನಮೂದಿಸಿದರೆ, ಆ ವ್ಯಕ್ತಿ ವಿವಿಧ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆ ಇದೆ. ಆದ್ದರಿಂದ ಮೃತರ ಹೆಸರು, ವಿಳಾಸ ಹಾಗೂ ಆಧಾರ್ ಸಂಖ್ಯೆಯನ್ನು ದಾಖಲಿಸುವಾಗ ಅಧಿಕಾರಿಗಳು ಅತ್ಯಂತ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

ಜನನ ಮತ್ತು ಮರಣ ನೋಂದಣಿಗೆ ಸಂಬಂಧಿಸಿದಂತೆ ನೋಂದಣಾಧಿಕಾರಿಗಳ ಯಾವುದೇ ಕ್ರಮ ಅಥವಾ ಆದೇಶದಿಂದ ಸಾರ್ವಜನಿಕರಿಗೆ ಅಸಮಾಧಾನ ಉಂಟಾದರೆ ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದು, ಈ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಹೇಳಿದರು. ಅಲಭ್ಯ ಪ್ರಮಾಣಪತ್ರ ನೀಡುವ ಸಂದರ್ಭದಲ್ಲೂ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಮರಣ ನೋಂದಣಿಯಲ್ಲಿ ವೈದ್ಯಕೀಯ ಮರಣ ಕಾರಣ ಪ್ರಮಾಣಪತ್ರದ ಮಾಹಿತಿಯನ್ನು ಇ-ಜನ್ಮ ತಂತ್ರಾಂಶದಲ್ಲಿ ಕಡ್ಡಾಯವಾಗಿ ಅಪ್‌ಲೋಡ್ ಮಾಡಿ, ಮರಣದ ಕಾರಣವನ್ನು ದಾಖಲಿಸಬೇಕು. ಎಲ್ಲಾ ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು ಡಿಜಿಟಲ್ ಸಹಿಯೊಂದಿಗೆ ವಿತರಿಸಬೇಕು. ಮನೆಗಳಲ್ಲಿ ಸಂಭವಿಸುವ ಮರಣಗಳನ್ನು ನಿಗದಿತ ಅವಧಿಯೊಳಗೆ ನೋಂದಣಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ತಾಲೂಕು ಮಟ್ಟದಲ್ಲಿ ಪ್ರತೀ ತಿಂಗಳು ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ಸಭೆ ನಡೆಸುವುದು, ನೋಂದಣಿ ಘಟಕಗಳ ಪರಿಶೀಲನೆ ನಡೆಸುವುದು ಹಾಗೂ ಸಂರಕ್ಷಣಾಧಿಕಾರಿಗಳು, ನೋಂದಣಾಧಿಕಾರಿಗಳು, ಖಾಸಗಿ ಆಸ್ಪತ್ರೆಗಳ ವೈದ್ಯರು ಮತ್ತು ಡೇಟಾ ಆಪರೇಟರ್‌ಗಳಿಗೆ ತರಬೇತಿ ಆಯೋಜಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸೋಮಶೇಖರ್ ಮೇಸ್ತಾ ಮಾಹಿತಿ ನೀಡಿ, ಕಳೆದ ತ್ರೈಮಾಸಿಕದಲ್ಲಿ ಜಿಲ್ಲೆಯಲ್ಲಿ 4,682 ಜನನ ಹಾಗೂ 2,425 ಮರಣ ಪ್ರಕರಣಗಳು ದಾಖಲಾಗಿವೆ. ಒಂದು ವರ್ಷದೊಳಗಿನ 13 ಶಿಶುಗಳು ಹಾಗೂ ಐದು ವರ್ಷದೊಳಗಿನ 3 ಮಕ್ಕಳ ಮರಣ ದಾಖಲಾಗಿದೆ ಎಂದು ತಿಳಿಸಿದರು. ಹೊನ್ನಾವರ ಮತ್ತು ಅಂಕೋಲಾ ತಾಲೂಕುಗಳಲ್ಲಿ ಜನನ-ಮರಣ ದಾಖಲೆಗಳ ಸ್ಕ್ಯಾನಿಂಗ್ ಮತ್ತು ಡಿಜಿಟಲೀಕರಣ ಕಾರ್ಯ ನಡೆಯುತ್ತಿದ್ದು, ಇದುವರೆಗೆ 2,80,652 ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ ಎಂದರು.

ಸಭೆಯಲ್ಲಿ ಕ್ರಿಮ್ಸ್ ಡೀನ್ ಡಾ. ಪೂರ್ಣಿಮಾ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಂಜಯ್ ದೊಡ್ಡಮನಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವರ್ಚುವಲ್ ಮೂಲಕ ತಾಲೂಕು ತಹಶೀಲ್ದಾರರು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಭಾಗವಹಿಸಿದ್ದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *