ಶಾಸಕರು ರಾಜೀನಾಮೆ ಕೊಟ್ಟರೆ ಎರಡೇ ನಿಮಿಷದಲ್ಲಿ ಅಂಗೀಕಾರ, ಅಸಮಾಧಾನಿತರಿಗೆ ಡಿಕೆ ಶಿವಕುಮಾರ್ ಖಡಕ್ ಸಂದೇಶ

ರಾಜ್ಯ ರಾಜಕೀಯ

Spread the love

ಬೆಂಗಳೂರು: ಸಚಿವ ಸ್ಥಾನ ಹಾಗೂ ನಿಗಮ-ಮಂಡಳಿಗಳ ನೇಮಕಾತಿ ವಿಚಾರವಾಗಿ ಪಕ್ಷದೊಳಗಿನ ಅಸಮಾಧಾನದ ನಡುವೆಯೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಸಮಾಧಾನಿತ ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶಾಸಕರು ರಾಜೀನಾಮೆ ನೀಡಲು ಮುಂದಾದರೆ ಅದನ್ನು ವಿಳಂಬವಿಲ್ಲದೆ ಅಂಗೀಕರಿಸುವಂತೆ ಸೂಚಿಸಿರುವುದಾಗಿ ಅವರು ತಿಳಿಸಿದ್ದಾರೆ.

<

ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಪಕ್ಷವೇ ಮುಖ್ಯ, ಪಕ್ಷದ ಶಿಸ್ತು ಎಲ್ಲಕ್ಕಿಂತ ಮುಖ್ಯ. ಯಾರೊಬ್ಬರ ವೈಯಕ್ತಿಕ ಆಸೆ-ಆಕಾಂಕ್ಷೆಗಳಿಗಿಂತ ಪಕ್ಷದ ಹಿತವೇ ಮೇಲು” ಎಂದು ಸ್ಪಷ್ಟಪಡಿಸಿದರು.

ಹಿಂದಿನ ರಾಜಕೀಯ ಬೆಳವಣಿಗೆಗಳನ್ನು ಉಲ್ಲೇಖಿಸಿದ ಅವರು, ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರ ಅವಧಿಯಲ್ಲಿ ಎಸ್. ಬಂಗಾರಪ್ಪ, ಮಲ್ಲಿಕಾರ್ಜುನ ಖರ್ಗೆ ಹಾಗೂ ಧರ್ಮಸಿಂಗ್ ಅವರಿಗೂ ಸಚಿವ ಸ್ಥಾನ ದೊರೆಯಲಿಲ್ಲ. ಅದೇ ರೀತಿ ತಮಗೂ ಹಾಗೂ ಜಿ. ಪರಮೇಶ್ವರ್ ಅವರಿಗೂ ಸಚಿವ ಸ್ಥಾನ ಸಿಗದ ಸಂದರ್ಭದಲ್ಲಿಯೂ ತಾಳ್ಮೆಯಿಂದ ಪಕ್ಷದ ನಿರ್ಧಾರವನ್ನು ಒಪ್ಪಿಕೊಂಡಿದ್ದೆವು ಎಂದು ಹೇಳಿದರು.

“ನಾನು ತಾಳ್ಮೆಯಿಂದ ಇರಲಿಲ್ಲವೇ? ಎಲ್ಲರೂ ತಾಳ್ಮೆಯಿಂದ ಇರಬೇಕು. ಸಚಿವ ಸ್ಥಾನ ಅಥವಾ ಹುದ್ದೆ ಸಿಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುವ ಬದಲು ಪಕ್ಷದ ನಿರ್ಧಾರವನ್ನು ಗೌರವಿಸಬೇಕು,” ಎಂದು ಅವರು ತಿಳಿಸಿದರು.

ಇದೇ ವೇಳೆ, “ಯಾವುದೇ ಶಾಸಕ ರಾಜೀನಾಮೆ ನೀಡಿದರೆ ಅದನ್ನು ಎರಡೇ ನಿಮಿಷದಲ್ಲಿ ಅಂಗೀಕರಿಸುವಂತೆ ಹೇಳಿದ್ದೇನೆ,” ಎಂದು ಹೇಳುವ ಮೂಲಕ ಪಕ್ಷದ ವಿರುದ್ಧ ಒತ್ತಡದ ರಾಜಕೀಯಕ್ಕೆ ಅವಕಾಶವಿಲ್ಲ ಎಂಬ ಸಂದೇಶ ರವಾನಿಸಿದರು.

ಇದರ ಜೊತೆಗೆ, ತಕ್ಷಣದಿಂದಲೇ ನಿಗಮ-ಮಂಡಳಿಗಳ ನೇಮಕಾತಿ ಪ್ರಕ್ರಿಯೆಯನ್ನು ರದ್ದುಪಡಿಸುವಂತೆ ಆದೇಶ ನೀಡಿರುವುದಾಗಿ ಡಿ.ಕೆ. ಶಿವಕುಮಾರ್ ತಿಳಿಸಿದರು. ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಕಾಂಗ್ರೆಸ್‌ನೊಳಗಿನ ಅಸಮಾಧಾನ ಮತ್ತು ಹುದ್ದೆಗಳ ಹಂಚಿಕೆ ಕುರಿತ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಮಹತ್ವ ಪಡೆದುಕೊಳ್ಳುವ ಸಾಧ್ಯತೆ ಇದೆ.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *