21 ವರ್ಷದೊಳಗಿನ ವ್ಯಕ್ತಿಗಳಿಗೆ ಸಿಗರೇಟ್ ಮಾರಾಟ ಮಾಡಿದರೆ ಪರವಾನಗಿ ರದ್ದು: ಎಡಿಸಿ ರಾಜು ಸೂಚನೆ

ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ ರಾಜ್ಯ

Spread the love

ಮಂಗಳೂರು: 21 ವರ್ಷದೊಳಗಿನ ವ್ಯಕ್ತಿಗಳಿಗೆ ಸಿಗರೇಟ್ ಸೇರಿದಂತೆ ಯಾವುದೇ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ.ನಿಯಮ ಉಲ್ಲಂಘಿಸುವ ಅಂಗಡಿಗಳ ಪರವಾನಗಿ ರದ್ದುಪಡಿಸುವಂತೆ ಅಪರ ಜಿಲ್ಲಾಧಿಕಾರಿ ರಾಜು ಕೆ.ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ದಕ್ಷಿಣ ಕನ್ನಡ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯಿದೆಗೆ 2024ರಲ್ಲಿ ಮಾಡಿರುವ ತಿದ್ದುಪಡಿಯಂತೆ, 21 ವರ್ಷದೊಳಗಿನವರಿಗೆ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದೆ. ಸಿಗರೇಟ್‌ಗಳನ್ನು ಚಿಲ್ಲರೆಯಾಗಿ ಮಾರಾಟ ಮಾಡುವುದಕ್ಕೂ ಅವಕಾಶವಿಲ್ಲ. ಶಾಲೆ, ಕಾಲೇಜುಗಳ 100 ಮೀಟರ್ ವ್ಯಾಪ್ತಿಯಲ್ಲಿಯೂ ಸಿಗರೇಟ್ ಹಾಗೂ ತಂಬಾಕು ಉತ್ಪನ್ನಗಳ ಮಾರಾಟ ನಿಷಿದ್ಧ. ಅಂಗಡಿಗಳಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವವರಿಗೂ 21 ವರ್ಷ ಪೂರ್ಣಗೊಂಡಿರಬೇಕು ಎಂದು ತಿಳಿಸಿದರು.

ನಿರಂತರ ತಪಾಸಣೆಗೆ ಸೂಚನೆ

ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳು ಅಂಗಡಿ, ಹೋಟೆಲ್, ಕೆಫೆಗಳಲ್ಲಿ ನಿರಂತರ ತಪಾಸಣೆ ನಡೆಸಬೇಕು. ಅಪ್ರಾಪ್ತರಿಗೆ ಸಿಗರೇಟ್ ಮಾರಾಟ ಮಾಡುತ್ತಿರುವುದು ಕಂಡುಬಂದರೆ ಸಂಬಂಧಪಟ್ಟ ಅಂಗಡಿಯ ಪರವಾನಗಿ ರದ್ದುಪಡಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಆರೋಗ್ಯ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯಿತಿಗಳು ಹಾಗೂ ಪೊಲೀಸರ ಸಹಯೋಗದಲ್ಲಿ ಜಂಟಿ ಕಾರ್ಯಾಚರಣೆ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಿಂಗಲ್ ಸಿಗರೇಟ್ ಮಾರಾಟಕ್ಕೂ ನಿಷೇಧ

ಸಿಗರೇಟ್‌ಗಳನ್ನು ಸಂಪೂರ್ಣ ಪ್ಯಾಕ್‌ನಲ್ಲಿಯೇ ಮಾರಾಟ ಮಾಡಬೇಕು. ಪ್ಯಾಕ್ ತೆರೆದು ಒಂದೊಂದೇ ಸಿಗರೇಟ್ ಮಾರಾಟ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಧೂಮಪಾನಕ್ಕೆ ಉತ್ತೇಜನ ನೀಡುವ ರೀತಿಯಲ್ಲಿ ಲೈಟರ್ ಅಥವಾ ಬೆಂಕಿಪೆಟ್ಟಿಗೆಗಳನ್ನು ಅಂಗಡಿಗಳಲ್ಲಿ ಇರಿಸುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದರು.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಅಥವಾ ತಂಬಾಕು ಸೇವಿಸಿ ಉಗುಳುವುದು ಕಂಡುಬಂದರೆ ನಿಯಮಾನುಸಾರ ₹1,000 ದಂಡ ವಿಧಿಸಿ ಎಚ್ಚರಿಕೆ ನೀಡಬೇಕು. ಅಧಿಕಾರಿಗಳು ಆಗಿಂದಾಗ್ಗೆ ಕಾರ್ಯಾಚರಣೆ ನಡೆಸಿ ತಪಾಸಣೆ ಕೈಗೊಳ್ಳಬೇಕು ಹಾಗೂ ಮುಂದಿನ ಸಭೆಯಲ್ಲಿ ಕೈಗೊಂಡ ಕ್ರಮಗಳ ವರದಿ ಸಲ್ಲಿಸಬೇಕು ಎಂದು ರಾಜು ಕೆ. ಸೂಚಿಸಿದರು.

‘ತಂಬಾಕು ಮುಕ್ತ ಶಾಲೆ’ ದೃಢೀಕರಣ

ಶಾಲೆ ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ಆಗಿಂದಾಗ್ಗೆ ಪರಿಶೀಲಿಸುವಂತೆ ಶಾಲಾ ಶಿಕ್ಷಣ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆಗೆ ಸೂಚಿಸಿದರು. ಶಿಕ್ಷಣ ಸಂಸ್ಥೆಗಳ 100 ಮೀಟರ್ ವ್ಯಾಪ್ತಿಯ ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಡೆಯದಂತೆ ನಿಗಾ ವಹಿಸಬೇಕು. ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಎಸ್‌ಡಿಎಂಸಿಗಳು ಪ್ರತಿ ತಿಂಗಳು ತಮ್ಮ ಶಿಕ್ಷಣ ಸಂಸ್ಥೆಗಳನ್ನು ‘ತಂಬಾಕು ಮುಕ್ತ ಶಾಲೆ’ ಎಂದು ದೃಢೀಕರಿಸಬೇಕು ಎಂದರು.

ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿಗಳು ಧೂಮಪಾನದ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಅಂಗಡಿ, ಹೋಟೆಲ್‌ಗಳಿಗೆ ಪರವಾನಗಿ ನೀಡುವಾಗ ತಂಬಾಕು ನಿಯಂತ್ರಣ ಕಾಯ್ದೆಯ ಷರತ್ತು ಮತ್ತು ನಿಬಂಧನೆಗಳನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮಿರೆಡ್ಡಿ, ಎಸಿಪಿ ನಜ್ಮಾ ಫಾರೂಖಿ, ವೆನ್‌ಲಾಕ್ ಆಸ್ಪತ್ರೆ ಅಧೀಕ್ಷಕ ಡಾ. ಶಿವಪ್ರಕಾಶ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿ ಡಾ. ನವೀನ್‌ಚಂದ್ರ ಕುಲಾಲ್ ಇದ್ದರು.

Leave a Reply

Your email address will not be published. Required fields are marked *